ರೊಡೀಸಿಯ ಮಾನವ - 
ಹತ್ತು ದಶಲಕ್ಷ ವರ್ಷಗಳಷ್ಟು ಪ್ರಾಚೀನ ದ್ದೆಂದು ಹೇಳಲಾಗಿರುವ, ಪ್ಲೀಸ್ಟೋಸೀನ್ ಯುಗದ ಉತ್ತರ ಅವಧಿಗೆ (ಸು. 1,40,000 ವರ್ಷಗಳಿಗೂ ಹಿಂದೆ) ಸೇರಿದ್ದ ವಂಶನಷ್ಟ ಗೊಂಡಿರುವ ಆದಿಮಾನವ. ಇವನ ಅಸ್ಥಿಪಂಜರದ ಪಳೆಯುಳಿಕೆಗಳು ದಕ್ಷಿಣ ಆಫ್ರಿಕದ ಉತ್ತರ ರೋಡೀಸಿಯ ಪ್ರದೇಶದಲ್ಲಿ ಕಂಡುಬಂದಿತ್ತು ಎಂದೇ ರೋಡೀಸಿಯ ಮಾನವ ಎಂಬ ಹೆಸರು ಅನ್ವರ್ಥವಾಗಿದೆ. ಈ ಮಾನವನನನ್ನು ಹೋಮೋ ಸೇಪಿಯನ್ ವರ್ಗಕ್ಕೆ ಸೇರಿಸಿದ್ದು ಹೋಮೋ-ರೋಡೀಸಿಯೆನ್ಸಿಸ್ ಎಂದು ಕರೆಯಲಾಗಿದೆ. ಇದೇ ತೆರನ ಮಾನವ ಅವಶೇಷಗಳನ್ನು ಪಶ್ಚಿಮ ಜರ್ಮನಿಯ ನಿಯಾಂಡರ್‍ತಾಲ್ ಕಣಿವೆಯಿಂದ ಮೊತ್ತಮೊದಲಿಗೆ 1856ರಲ್ಲಿ ಆವಿಷ್ಕರಿಸಲಾಯಿತು. ಇಂಥ ಹಲವಾರು ಮಾನವಾವಶೇಷಗಳು ಯುರೋಪ್, ಉತ್ತರ ಆಫ್ರಿಕ ಮತ್ತು ಮಧ್ಯಪೂರ್ವೋತ್ತರ ರಾಷ್ಟ್ರಗಳು ಹಾಗೂ ಸೈಬೀರಿಯ ಗಳಲ್ಲಿ ಕಾಣಸಿಕ್ಕಿವೆ. ಈ ಪಳೆಯುಳಿಕೆಗಳೊಡನೆ ದೊರೆತಿರುವ ಶಿಲಾಯುಧಗಳು ಮೌಸ್ಟೀರಿಯನ್ ಸಂಸ್ಕøತಿ ಕಾಲವನ್ನು (ಮಧ್ಯ ಶಿಲಾಯುಗ) ಪ್ರತಿನಿಧಿಸುತ್ತವೆ. ಆದಿಮಾನವ ಇಂಥ ಹಲವಾರು ವಿಧದ ಶಿಲಯುಧ ಗಳನ್ನು ಕಾಡು ಪ್ರಾಣಿಗಳನ್ನು ಬೇಟೆಯಾಡುವುದಕ್ಕೂ ಮಾಂಸವನ್ನು ಪರಿಷ್ಕರಿಸುವುದಕ್ಕೂ ಉಪಯೋಗಿಸುತ್ತಿದ್ದ. ಗುಹೆಗಳಲ್ಲಿ ವಾಸಿಸುತ್ತಿದ್ದ ರೋಡೀಸಿಯ ಮಾನವನಿಗೆ ಬೆಂಕಿಯ ಉಪಯೋಗ ತಿಳಿದಿತ್ತು. ಅದಿಮಾನವ ಮೊತ್ತಮೊದಲ ಬಾರಿಗೆ ಮೃತರನ್ನು ಹೂಳುತ್ತಿದ್ದ ರೀತಿ ಹಾಗೂ ಅಂತ್ಯಸಂಸ್ಕಾರದ ವಿಧಿ ಪದ್ಧತಿಯ ಕ್ರಮಗಳ ಸಾಕ್ಷ್ಯಾಧಾರಗಳು ದೊರೆತಿವೆ. ನಿಯಾಂಡರ್‍ತಾಲ್ ವರ್ಗಕ್ಕೆ ಸೇರಿದ ಜಾವದ ಸೋಲೊ ಮಾನವ ಹಾಗೂ ಜ್ಹಾಂಬಿಯದ ರೋಡೀಸಿಯ ಮಾನವರ ಪಳೆಯುಳಿಕೆಗಳನ್ನು ಆ ಪ್ರದೇಶಗಳಿಂದ ಹೊರತೆಗೆದಿದ್ದಾರೆ. ಇಂಥ ನಿಯಾಂಡರ್‍ತಾಲ್ ಆದಿಮಾನವನಿಗೆ ಸ್ವಾನ್‍ಕಾಂಬ್ ಮತ್ತು ಸ್ಟ್ೈನ್ ಹೈಮ್ ಮಾನವರನ್ನು ಮೂಲಸಂಬಂಧಿಗಳೆಂದು ಪರಿಗಣಿಸ ಲಾಗಿದೆ. ಆ ಮಾನವರ ಅಸ್ಥಿಪಂಜರದ ಲಕ್ಷಣಗಳು ರೋಡೀಸಿಯ ಮಾನವನ ಅಸ್ಥಿಪಂಜರಕ್ಕೆ ಅತ್ಯಂತ ಸಾದೃಶ್ಯವಾಗಿದ್ದುದೇ ಇದಕ್ಕೆ ಕಾರಣ. ನಿಯಾಂಡರ್‍ತಾಲ್ ಮಾನವನ ಉತ್ಕøಷ್ಟ ಮಾದರಿಯ ಪಳೆಯುಳಿಕೆಯಲ್ಲಿ ಕಂಡುಬರುವ ವಿಶೇಷ ಲಕ್ಷಣಗಳೆಂದರೆ ವಿಶಾಲ ಹಾಗೂ ಮಂದವಾದ ತಲೆಚಿಪ್ಪು ಇರುವುದು ಮತ್ತು ಹಣೆ ಭಾಗ ಇಳಿಜಾರಾಗಿದ್ದು ಅದರ ಹುಬ್ಬಿನ ಭಾಗ ಪ್ರಬಲವಾಗಿ ಉಬ್ಬಿಕೊಂಡಿರುವುದು. ಮೆದುಳಿನ ಸರಾಸರಿ ಘನಗಾತ್ರ 1450 ಕ್ಯೂಬಿಕ್ ಸೆಂಟಿಮೀಟರ್. ಈ ಗಾತ್ರ ಇಂದಿನ ಮಾನವನ ಮೆದುಳಿನ ಗಾತ್ರಕ್ಕಿಂತಲೂ ಸ್ವಲ್ಪ ದೊಡ್ಡದಾಗಿತ್ತು. ರೋಡೀಸಿಯ ಮಾನವ ಸು. 152 ಸೆಂಮೀ (ಸು. 5ಅಡಿ) ಎತ್ತರ ಇದ್ದು ಕಟ್ಟುಮಸ್ತಾದ ದೇಹದಾರ್ಢ್ಯವುಳ್ಳವನಾಗಿದ್ದ.

ನಿಯಾಂಡರ್‍ತಾಲ್ ಮಾನವನಿಗೂ ಆಧುನಿಕ ಮಾನವನಿಗೂ ಇದ್ದಂಥ ಸಂಬಂಧಗಳು ನಿಖರವಾಗಿ ತಿಳಿದುಬಂದಿಲ್ಲ. ಆದರೆ ಒಂದೇ ಮೂಲದ ಪ್ರಾರಂಭಿಕ ಮಾದರಿಯಿಂದ ಈ ಎರಡು ಮಾನವ ಪ್ರಕಾರಗಳು ಸಮಾಂತರವಾಗಿ ವಿಕಾಸ ಹೊಂದಿದವೆಂಬುದು ಕೆಲವು ಮಾನವಶಾಸ್ತ್ರಜ್ಞರ ಅಭಿಪ್ರಾಯ. ಯುರೋಪಿನ ನಿಯಾಂಡರ್‍ತಾಲ್ ಮತ್ತು ಕ್ರೋಮ್ಯಾಗ್ನನ್ ಮಾನವರ ನಡುವೆ ಅವಿಚ್ಛಿನತೆ ಕಂಡುಬಂದಿಲ್ಲ. ಕ್ರೋಮ್ಯಾಗ್ನನ್ ಮಾನವ ಶಾರೀರಿಕವಾಗಿ ಮತ್ತು ಸಾಂಸ್ಕøತಿಕ ದೃಷ್ಟಿಯಿಂದ ನಿಯಾಂಡರ್ ತಾಲ್ ಮಾನವನಿಗಿಂತ ವಿಭಿನ್ನವಾಗಿದ್ದುದೇ ಇದಕ್ಕೆ ಕಾರಣ. ಆತ 35000 ವರ್ಷಗಳಷ್ಟು ಹಿಂದೆಯೇ ಬಹುಶಃ ಎಲ್ಲಿಂದಲೊ ವಲಸೆ ಬಂದು ಯುರೋಪಿನಲ್ಲಿ ವಾಸ್ತವ್ಯ ಹೂಡಿರಬೇಕು ಎಂದೆನ್ನಲಾಗಿದೆ. ಈ ಎರಡು ಮನುಕುಲದ ಮಧ್ಯ ಸಂಪರ್ಕವಿತ್ತೆಂಬುದಕ್ಕೆ ಪ್ರಬಲವಾದ ಯಾವ ಸಾಕ್ಷಾಧಾರಗಳೂ ದೊರಕಿಲ್ಲ. ಆದ್ದರಿಂದ ಮೊದಲಿದ್ದ ನಿಯಾಂಡರ್‍ತಾಲ್ ಬುಡಕಟ್ಟನ್ನು ಅನಂತರದ ಕ್ರೋಮ್ಯಾಗ್ನನ್ ಕುಲ ಮೂಲೋತ್ಪಾಟನೆ ಮಾಡಿತು ಎಂಬ ವಿಚಾರದಲ್ಲಿ ಅಭಿಪ್ರಾಯ ಭೇದಗಳಿವೆ. ಇಸ್ರೇಲ್‍ನಲ್ಲಿರುವ ಮೌಂಟ್ ಕಾರ್ಮೆಲ್ ಎಂಬ ಪ್ರದೇಶದಲ್ಲಿ ನಿಯಾಂಡರ್‍ತಾಲ್ ಮತ್ತು ನವೀನ ಮಾನವರ ನಡುವೆ ವಿಕಸನ ಏರ್ಪಟ್ಟಿತ್ತು ಇಲ್ಲವೆ ಅವು ಅಂತರತಳಿಗಳಾಗಿದ್ದುವು ಎಂದು ಹೇಳುವು ದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಹೀಗಾಗಿ ನಿಯಾಂಡರ್‍ತಾಲ್ ಮಾನವ ವಂಶನಷ್ಟಹೊಂದಿದನೆ ಅಥವಾ ಸಂಮಿಳಿತವಾದನೆ ಇಲ್ಲವೆ ಆಧುನಿಕ ಮಾನವನಾದನೆ ಎಂಬುದು ಇನ್ನೂ ಸ್ಪಷ್ಟಪಟ್ಟಿಲ್ಲ. ನೋಡಿ-ನಿಯಾಂಡರ್ ತಾಲ್ ಮಾನವ.	 
(ಟಿ.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ